ಕಾಡಸಿದ್ಧೇಶ 2

ಈತ ವಚನಕಾರ ಈತನ ಕಾಲದೇಶಾದಿ ವಿಷಯಗಳು ತಿಳಿದಿಲ್ಲ. ಕಾಡಿನೊಳಗಾದ ಶಂಕರಪ್ರಿಯ ಚಿನ್ನಕದಂಬಲಿಂಗ ನಿರ್ಮಾಯ ಪ್ರಭುವೇ-ಎಂಬುದು ಈತನ ಅಂಕಿತ. ಇಷ್ಟಲಿಂಗಶತಕವನ್ನು ಬರೆದ ಕಾಡಸಿದ್ಧೇಶನೊಬ್ಬನಿದ್ದಾನೆ. (ನೋಡಿ-ಕಾಡಿಸಿದ್ಧೇಶ1) ವಚನಕಾರ ಕಾಡಸಿದ್ಧೇಶ ತನ್ನ ಗುರುಪರಂಪರೆಯನ್ನು ಮೊದಲ ವಚನದಲ್ಲಿ ಹೇಳಿಕೊಂಡಿದ್ದಾನೆ. ಅಲ್ಲಿನ ಇಪ್ಪತೆರಡು ಮಂದಿ ಗುರುವರ್ಯರಲ್ಲಿ ಕಡೆಯವನಾದ ಸಂಗಮೇಶ್ವರ ದೇವರೇ ಕಾಡಿಸಿದ್ಧೇಶನ ಗುರು.

 ಈತನ ವಚನಗಳು ಕಾಡಸಿದ್ಧೇಶರ ವಚನಗಳು ಎಂದು ಪ್ರಸಿದ್ಧವಾಗಿವೆ. ವಚನಗಳ ಸಂಖ್ಯೆ 561. ಇವುಗಳಲ್ಲಿ 77 ಬೆಡಗಿನ ವಚನಗಳಿವೆ. ಕೆಲವು ವಚನಗಳಿಗೆ ಟಿಪ್ಪಣಿಯಿದೆ. ಅನೇಕ ವಚನಗಳಲ್ಲಿ ಉರ್ದು ಭಾಷೆಯ ಪದಗಳು ಹೇರಳವಾಗಿವೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್‍ಸ್ಥಲಸಿದ್ಧಾಂತ ರಹಸ್ಯಗಳನ್ನು ತಿಳಿಸಬಲ್ಲ ವಚನಶಾಸ್ತ್ರದಲ್ಲಿ ಕಾಡಸಿದ್ಧೇಶ್ವರ ವಚನಗಳಿಗೆ ಪ್ರಮುಖ ಸ್ಥಾನವಿದೆ. ಒಂದು ವಚನವನ್ನು ಇಲ್ಲಿ ಉದಾಹರಿಸುಲಾಗಿದೆ : ಒಮ್ಮನದವರಿಗೆ ಹಣವಿಲ್ಲ ; ಇಮ್ಮನದವರಿಗೆ ಹಣವುಂಟು. ಇಮ್ಮನ ಸುಟ್ಟು, ಒಮ್ಮನ ನುಂಗಿ ಬಂದವರು ಮರಳಿ ಬಾರದೆ ಹೋದರು ನೋಡೆಂದನಯ್ಯ ಕಾಡಿನೊಳಗಾದ ಶಂಕರಪ್ರಿಯ ಚೆನ್ನಕದಂಬಲಿಂಗ ನಿರ್ಮಾಯ ಪ್ರಭುವೇ.          

 (ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ